ಪ್ರಾಚ್ಯವಿದ್ಯಾ ಸಂಶೋಧನಾಲಯ -
	ಕರ್ನಾಟಕ ಸರ್ಕಾರದ ವತಿಯಿಂದ ನಡೆಯುತ್ತಿರುವ ಪ್ರಾಚೀನ ವಿದ್ಯಾಸಂಸ್ಥೆಗಳಲ್ಲೊಂದು. ಚಾಮರಾಜ ಒಡೆಯರು 1891ನೆಯ ಇಸವಿ ಅಕ್ಟೋಬರ್ ತಿಂಗಳಲ್ಲಿ ಈ ಸಂಸ್ಥೆಯನ್ನು ಜ್ಯೂಬಿಲಿ ಹಾಲಿನಲ್ಲಿ ಪ್ರಾರಂಭಿಸಿದರು. ಆಗ ಇದರ ಹೆಸರು ಓರಿಯಂಟಲ್ ಲೈಬ್ರರಿ ಎಂದು. ಭಾರತೀಯ ಸಾಹಿತ್ಯ ಸಂಸ್ಕøತಿ ಕಲೆಗಳಿಗೆ ಸಂಬಂಧಿಸಿದ ಪ್ರಾಚೀನ ಕೃತಿಗಳನ್ನು ಸಂಪಾದಿಸಿ ಪ್ರಕಟಿಸುವುದೇ ಈ ಸಂಸ್ಥೆಯ ಉದ್ದೇಶ. ಸಂಸ್ಕøತ ಮತ್ತು ಕನ್ನಡ ಭಾಷೆಗಳ ಹಲವಾರು ಕೃತಿಗಳನ್ನು ಈವರೆಗೆ ಸಂಶೋಧಿಸಿ ಸಂಪಾದಿಸಿ ಪ್ರಕಟಿಸಲಾಗಿದೆ. ಪ್ರಾರಂಭವಾದಾಗ ಈ ಸಂಸ್ಥೆ ಸರ್ಕಾರದ ವಿದ್ಯಾ ಇಲಾಖೆಯ ವ್ಯಾಪ್ತಿಗೊಳಪಟ್ಟಿತ್ತು. ಇಂದು ಇದು ಮೈಸೂರು ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಒಳಪಟ್ಟಿದೆ. ಈ ಮಹಾಸಂಸ್ಥೆಯ ಪ್ರಗತಿಗೆ ಅನೇಕ ವಿದ್ವಾಂಸರು ಅಭಿಮಾನಿಗಳು ಶ್ರಮಿಸಿದ್ದಾರೆ. ಅವರಲ್ಲಿ ಎಂ.ಎನ್.ಕೆ.ರಾವ್, ಎಂ. ಹಿರಿಯಣ್ಣ-ಇವರ ಹೆಸರುಗಳು ಸ್ಮರಿಸತಕ್ಕವಾಗಿವೆ. ಪ್ರಾರಂಭದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯವೂ ಪ್ರಾಚ್ಯ ವಿದ್ಯಾ ಸಂಶೋಧನಾಲಯವೂ ಒಂದೇ ಕಟ್ಟಡದಲ್ಲಿ ಕಾರ್ಯ ನಡೆಸುತ್ತಿದ್ದುವು. ಇದರಿಂದ ಪ್ರಾಚ್ಯವಸ್ತು ಸಂಗ್ರಹಾಲಯದವರು ಸಂಗ್ರಹಿಸುತ್ತಿದ್ದ ಅನೇಕ ಹಸ್ತಪ್ರತಿಗಳು ಈ ಸಂಸ್ಥೆಯ ಗ್ರಂಥಭಂಡಾರಕ್ಕೆ ಸೇರಿದುವು.

	ಪ್ರಾಚೀನ ಹಸ್ತಪ್ರತಿಗಳನ್ನೂ ಐತಿಹಾಸಿಕ ದಾಖಲೆಗಳನ್ನೂ ಸಂಗ್ರಹಿಸಿ ಅವನ್ನು ಶಾಸ್ತ್ರೀಯವಾಗಿ ಸಂಪಾದಿಸಿ ಪ್ರಕಟಿಸುವುದರ ಜೊತೆಗೆ ವಿದ್ವಾಂಸರ, ವಿದ್ಯಾರ್ಥಿಗಳ ಮತ್ತು ಸಾರ್ವಜನಿಕ ಸೌಲಭ್ಯಕ್ಕಾಗಿ ಗ್ರಂಥಭಂಡಾರವನ್ನೂ ಪ್ರಾರಂಭಿಸಲಾಯಿತು. ಸಂಶೋಧಕರಿಗೆ ಎಲ್ಲ ಸೌಲಭ್ಯಗಳನ್ನೂ ದೊರಕಿಸಿ ಕೊಡಲಾಯಿತು.

	ಇದರ ಮೊದಲ ಮುಖ್ಯಾಧಿಕಾರಿಗಳಾದ (ಕ್ಯೂರೋಟರ್) ಎ. ಮಹದೇವಶಾಸ್ತ್ರಿಗಳು 1891-1916ರವರೆಗೆ ಮಹತ್ತರ ಸೇವೆ ಸಲ್ಲಿಸಿದರು. ಮಹದೇವಶಾಸ್ತ್ರಿಗಳ ಅಧಿಕಾರವಧಿಯಲ್ಲಿ, ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟಾಗ ಸುದರ್ಶನಾಚಾರ್ಯರ ಆಪಸ್ತಂಭ ಗೃಹ್ಯಸೂತ್ರ ಎಂಬ ಸಂಸ್ಕøತಗ್ರಂಥ ವ್ಯಾಖ್ಯಾನದೊಂದಿಗೆ 1893ರಲ್ಲೂ ಕನ್ನಡದ ಆದಿಕವಿಯೂ ಮಹಾಕವಿಯೂ ಆದ ಪಂಪನ ಆದಿಪುರಾಣ 1900ರಲ್ಲೂ ಪ್ರಪ್ರಥಮವಾಗಿ ಪ್ರಕಟವಾದುವು. ಆ ಮೇಲೆ ಸಂಸ್ಕøತ ಕನ್ನಡ ಕಾವ್ಯಗಳ ಪರಿಷ್ಕರಣ ಕಾರ್ಯ ಜೊತೆಜೊತೆಯಾಗಿಯೇ ನಡೆದುಕೊಂಡು ಬಂತು. ಈ ಎರಡೂ ಭಾಷೆಗಳಲ್ಲಿ ಪರಿಣತರಾದ ವಿದ್ವಾಂಸರು ಈ ಸಂಸ್ಥೆಗೆ ಮಹತ್ತರವಾದ ಸೇವೆಯನ್ನು ಸಲ್ಲಿಸಿದ್ದಾರೆ. ಕಸ್ತೂರಿ ರಂಗಾಚಾರ್, ನರಹರಿ ಜೋಯಿಸ್, ಆರ್. ರಾಘವೇಂದ್ರಚಾರ್, ಲಕ್ಷ್ಮೀಪುರಂ ಶ್ರೀನಿವಾಸಾಚಾರ್, ವಿ. ಶಾಮಾಚಾರ್, ಡಿ. ಎಲ್, ನರಸಿಂಹಾಚಾರ್, ತೀ.ನಂ. ಶ್ರೀಕಂಠಯ್ಯ-ಇವರು ಸ್ಮರಣಾರ್ಹರು.

	ಆರ್. ಶಾಮಾಶಾಸ್ತ್ರಿಗಳು ಮುಖ್ಯಾಧಿಕಾರಿಗಳಾದಾಗ (1918) ಒಂದು ಆಡಳಿತ ಮಂಡಳಿ ನೇಮಕವಾಯಿತು. ಅಧ್ಯಕ್ಷರು ಮೈಸೂರು ವಿಶ್ವವಿದ್ಯಾಲಯದ ಅಂದಿನ ಕುಲಪತಿಗಳಾದ ಸಿ. ಆರ್. ರೆಡ್ಡಿ. ಸದಸ್ಯರು ಎಂ. ಹಿರಿಯಣ್ಣ, ಬಿ. ಎಂ. ಶ್ರೀಕಂಠಯ್ಯ ಮತ್ತು ನವೀನಂ ರಾಮಾನುಜಾಚಾರ್ಯ. ಶಾಮಾಶಾಸ್ತ್ರಿಗಳು ಪ್ರಥಮ ಬಾರಿಗೆ ಸಂಪಾದಿಸಿ ಪ್ರಕಟಿಸಿದ ಕೌಟಿಲ್ಯನ ಅರ್ಥಶಾಸ್ತ್ರ ದೇಶವಿದೇಶಗಳಲ್ಲಿ ಕೀರ್ತಿ ತಂದುಕೊಟ್ಟಿತು. ಸಂಸ್ಥೆಯ ಪ್ರದೇಶಕ್ಕೆ ಕೌಟಿಲ್ಯ ಭವನಂ ಎಂಬ ಹೆಸರೇ ಪ್ರಾಪ್ತವಾಯಿತು. 1929ರ ವೇಳೆಗೆ 19 ಸಂಸ್ಕøತ ಗ್ರಂಥಗಳೂ 9 ಕನ್ನಡ ಗ್ರಂಥಗಳೂ ಪ್ರಕಟವಾಗಿದ್ದುವು. ಶಾಮಾಶಾಸ್ತ್ರಿಗಳು 1929ರಲ್ಲಿ ನಿವೃತ್ತರಾದ ಮೇಲೆ ಡಿ. ಶ್ರೀನಿವಾಸಾಚಾರ್ಯರೂ ಇವರ ಅನಂತರ (1936) ಎಂ. ಎಸ್. ಬಸವಲಿಂಗಯ್ಯನವರೂ ಮುಖ್ಯಾಧಿಕಾರಿಗಳಾದರು. ಈ ವೇಳೆಗೆ 82 ಸಂಸ್ಕøತ ಗ್ರಂಥಗಳೂ 24 ಕನ್ನಡ ಗ್ರಂಥಗಳೂ ವಿವರಣಾತ್ಮಕ ಗ್ರಂಥಸೂಚಿಯ ಒಂದು ಸಂಪುಟವೂ ಪ್ರಕಟವಾಗಿದ್ದುವು. 1943ರಲ್ಲಿ ಬಸವಲಿಂಗಯ್ಯನವರು ತೀರಿಕೊಂಡ ಮೇಲೆ ಅಧಿಕಾರಕ್ಕೆ ಬಂದ ಎಚ್. ಆರ್. ರಂಗಸ್ವಾಮಿ ಅಯ್ಯಂಗಾರ್ಯರ ಆಡಳಿತಾವಧಿಯಲ್ಲಿ ರಚಿತವಾದ ಮಂಡಲಿ ಒಪ್ಪಿಸಿದ ವರದಿಯನ್ನು ಸರಕಾರ ಅಂಗೀಕರಿಸಿತಾಗಿ ಆವರೆಗೆ ಪ್ರಚಲಿತವಾಗಿದ್ದ ಓರಿಯಂಟಲ್ ಲೈಬ್ರರಿ ಎಂಬ ಹೆಸರನ್ನು ಓರಿಯಂಟಲ್ ರೀಸರ್ಚ್ ಇನ್‍ಸ್ಟಿಟ್ಯೂಟ್ ಎಂದು ಬದಲಾಯಿಸಲಾಯಿತು. ಕ್ಯೂರೇಟರ್ ಹುದ್ದೆ ಸೂಪರಿಂಟೆಂಡೆಂಟ್ ಎಂದಾಯಿತು. ಸಂಸ್ಥೆ ಸ್ವಾವಲಂಬನೆಯತ್ತ ಸಾಗಿತು. ಸಂಸ್ಥೆಯ ಕಾರ್ಯಕಲಾಪಗಳನ್ನು ವಿಭಜಿಸಿ ವಿಸ್ತರಿಸುವ ದೃಷ್ಟಿಯಿಂದ 1946ರಲ್ಲಿ ವಿ.ಎಲ್.ಡಿಸೋಜರವರ ಅಧ್ಯಕ್ಷತೆಯಲ್ಲಿ ಏರ್ಪಟ್ಟ ಮಂಡಲಿ ಸಂಸ್ಥೆಯ ಸ್ಥಾನಗಳನ್ನು ಉನ್ನತಗೊಳಿಸುವುದರ ಜೊತೆಗೆ ಸಂಸ್ಕøತ, ಕನ್ನಡ, ಪರ್ಷಿಯನ್ ವಿಭಾಗಗಳಿಗೆ ಪ್ರತ್ಯೇಕ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದೂ ಸಂಸ್ಥೆಯ ಮುಖ್ಯಾಧಿಕಾರಿಯ ಸೂಪರಿಂಟೆಂಡೆಂಟ್ ಎಂಬ ಹೆಸರನ್ನು ನಿರ್ದೇಶಕರು ಎಂದು ಕರೆಯಬೇಕೆಂದೂ ಸಲಹೆ ಮಾಡಿತು. 1947ರಲ್ಲಿ ರಾಧಾಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿಯ ವಿಶ್ವವಿದ್ಯಾನಿಲಯದ ಧನಸಹಾಯದ ಆಯೋಗ ಸಂಸ್ಥೆಗೆ ಭೇಟಿಕೊಟ್ಟು ಆ ವರೆಗಿನ ವರದಿಗಳನ್ನೆಲ್ಲ ಪರಿಶೀಲಿಸಿ ಹಲವಾರು ಸೂಚನೆಗಳನ್ನು ನೀಡಿತು. 1954ರಲ್ಲಿ ಮುಖ್ಯಾಧಿಕಾರಿಯ ಹುದ್ದೆಯ ಹೆಸರು ನಿರ್ದೇಶಕರು ಎಂದಾಯಿತು. 1956ರಲ್ಲಿ ಎಚ್. ದೇವೀರಪ್ಪನವರು ನಿರ್ದೇಶಕರಾದರು. ಆಗ ಸಹಾಯಕ ನಿರ್ದೇಶಕರಾಗಿದ್ದವರು ಎನ್. ಬಸವಾರಾಧ್ಯರು. 1957ರಲ್ಲಿ ಪಂಡಿತರ ಹುದ್ದೆಯನ್ನು ಸಂಶೋಧನ ಸಹಾಯಕ ಎಂದು ಕರೆಯಲಾಯಿತು. ಆ ವೇಳೆಗೆ ಸಂಸ್ಥೆಯ ಪ್ರಕಟಣೆಗಳು ಗಣನೀಯ ಪ್ರಮಾಣದಲ್ಲಿ ಹೊರಬಂದಿದ್ದುವು. ಸಂಸ್ಕøತದ 111 ಗ್ರಂಥಗಳೂ ಕನ್ನಡದ 41 ಗ್ರಂಥಗಳೂ ಕನ್ನಡ ಹಸ್ತಪ್ರತಿಗಳ ಸೂಚಿಯ 4 ಸಂಪುಟಗಳೂ ಪ್ರಕಟವಾಗಿದ್ದುವು. ಅಲ್ಲದೆ ಅಲಭ್ಯವೂ ಅಪೂರ್ವವೂ ಆದ ಹಸ್ತಪ್ರತಿಗಳನ್ನು ಸಂಗ್ರಹಿಸಲು 1954ರಲ್ಲಿ ಮೈಕ್ರೊಫಿಲ್ಮ್ ವ್ಯವಸ್ಥೆಯನ್ನು ಮಾಡಲಾಗಿತ್ತು.

	ಆಗ್ಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಪಣಿಕ್ಕರ್ 1963-64ರಲ್ಲಿ ಸಂಸ್ಥೆಯ ಪುರೋಭಿವೃದ್ಧಿಗಾಗಿ ಒಂದು ಪ್ರಗತಿಗಾಮಿ ಸಲಹೆ ಇತ್ತರು. ಕನ್ನಡ ಹಸ್ತಪ್ರತಿಗಳ ಸಂಶೋಧನಕಾರ್ಯವನ್ನು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೂ ಸಂಸ್ಕøತ ಹಸ್ತಪ್ರತಿಗಳ ಸಂಶೋಧನಕಾರ್ಯವನ್ನು ಸಂಸ್ಕøತ ವಿಭಾಗಕ್ಕೂ ಸೇರಿಸುವಂತೆ ಸೂಚಿಸಿದರು. ಇದರಂತೆ 1966ನೆಯ ಫೆಬ್ರವರಿ 20ರಿಂದ ಸಂಸ್ಥೆ ಎರಡು ಭಾಗ ಆಯಿತು. ಕನ್ನಡ ಹಸ್ತಪ್ರತಿಗಳು, ಅವುಗಳ ಸಂಶೋಧನೆ, ಸಂರಕ್ಷಣೆ, ಕೃತಿಗಳ ಪ್ರಕಟನಕಾರ್ಯವನ್ನು ಕನ್ನಡ ಅಧ್ಯಯನ ಸಂಸ್ಥೆಗೆ ವಹಿಸಲಾಯಿತು. ಸಂಸ್ಕøತ ವಿಭಾಗದ ಮುಖ್ಯಸ್ಥರ ಮೇಲ್ವಿಚಾರಣೆಯಲ್ಲಿ ಸಂಸ್ಕøತ ವಿಭಾಗ ಅಲ್ಲೆ ಉಳಿಯಿತು.

	ಸಂಸ್ಕøತ ವಿಭಾಗದಲ್ಲಿ 1979ರವರೆಗೆ 127 ಸಂಸ್ಕøತ ಗ್ರಂಥಗಳು ಪ್ರಕಟವಾಗಿವೆ. ಭಾರತ ಸರ್ಕಾರದ ಧನಸಹಾಯದೊಂದಿಗೆ ಸಂಸ್ಕøತ ಹಸ್ತಪ್ರತಿಗಳ ವಿವರಣಾತ್ಮಕ ಸೂಚಿಯ 3 ಸಂಪುಟಗಳು ಪ್ರಕಟವಾಗಿವೆ. ಗ್ರಂಥ ಭಂಡಾರದಲ್ಲಿ 60 ಸಾವಿರ ಹಸ್ತಪ್ರತಿಗಳೂ 25 ಸಾವಿರ ಮುದ್ರಿತ (ಸಂಸ್ಕøತ-ಆಂಗ್ಲ-ಕನ್ನಡ-ತೆಲುಗು-ಹಿಂದಿ-ಮರಾಠಿ-ತಮಿಳು) ಗ್ರಂಥಗಳೂ ಇವೆ. ಸಂಸ್ಥೆಯ ವತಿಯಿಂದ ಮೈಸೂರು ಓರಿಯಂಟಲಿಸ್ಟ್ ಎಂಬ ದೈಭಾಷಿಕ ವಾರ್ಷಿಕ ಪತ್ರಿಕೆ ಪ್ರಕಟವಾಗುತ್ತಿದೆ. ಇದರ ವಿನಿಮಯಕ್ಕಾಗಿ ದೇಶ ವಿದೇಶಗಳ ಪತ್ರಿಕೆಗಳು ಬರುತ್ತಿವೆ. 11 ಸಹಾಯಕ ಸಂಶೋಧಕರು ಒಬ್ಬ ಉಪನಿರ್ದೇಶಕರು ಇದ್ದಾರೆ. ಸಹಸ್ರಾರು ಹಸ್ತಪ್ರತಿಗಳನ್ನೂ ಮೈಕ್ರೊಫಿಲ್ಮ್ ಪ್ರತಿಗಳನ್ನು ಪ್ರಾಚೀನ ಕಾವ್ಯಗಳ ಒಂದು ಬೃಹದ್ಗ್ರಂಥ ಭಂಡಾರವನ್ನೂ ಹೊಂದಿರುವ ಪಾಚ್ಯವಿದ್ಯಾ ಸಂಶೋಧನಾಲಯ ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಸ್ಥೆಯಿಂದ ಪ್ರಕಟವಾದ ಕೃತಿಗಳು ಸ್ವರಾಷ್ಟ್ರ ಮತ್ತು ಪರರಾಷ್ಟ್ರಗಳಲ್ಲಿ ಅಪಾರ ಕೀರ್ತಿ ತಂದಿವೆ.
(ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ